Thursday, July 12, 2012

ಮುಟ್ಟಲಾಗದು ತಬ್ಬಲಾಗದು

ಹುಡುಗಿ
ನಿನ್ನಹಂಕಾರದ ಜೊಲ್ಲು ನಾಯಿಗೆ
ಸಾಕಾಗಿದೆ ಮೂಳೆ
ಎಸೆದೆಸೆದು
ಕೆಲವೊಮ್ಮೆ
ಮುಗ್ಧವಾಗಿ ನನ್ನದೇ
ಕೈಬೆರಳು, ಎದೆಗೂಡಿನ
ಎಲುಬು ಮುರಿದು
ಮತ್ತೆ ಕೆಲವೊಮ್ಮೆ
ಅಲ್ಯುಮಿನಿಯಂ ಫಾಯಿಲ್
ಅವುಚಿದ ಬಿಕರಿಗಿಟ್ಟ
ಬೋನ್ ಪೀಸು
ನೀನೆಂದೆ
ನನಗೊಂದು
ರಮ್ಯ ಕವನ ಬರೆದುಕೊಡು
ಏಕಾಂತದಲ್ಲಿ
ನಿನ್ನೆದೆಗೊರಗಿರುವಾಗ
ಗಂಟಲು ತಲುಪದ
ಹೃದಯದ ಭಾಷೆಯಲ್ಲಿ
ಹಾಡಿಬಿಡು
ಗೊತ್ತಿಲ್ಲ ನಿನಗೆ
ಬೆತ್ತಲಾಗಿ ಬರುವ ನಿನ್ನೆದುರಿಸಲು
ನನ್ನ ಸೇನೆ ಸನ್ನದ್ಧ
ನೀಶೆ, ಫ್ರಾಯ್ಡು, ಪತಂಜಲಿ
ನಿಂತಲ್ಲಿ ಮುತ್ತು
ಕೊಡೆನ್ನುವೆ ನೀನು
ನೀನಂದುಕೊಂಡಷ್ಟು
ಜಾಣ ನಾನಲ್ಲ
ಸರಪಳಿ ಕಟ್ಟಿ ನನ್ನನೇ
ಜೀತವಾಗಿಸಿ
ಮೆರೆವ ಅರಸ ನಾನು
ಮೊಟ್ಟೆಯೊಡೆದು ಬೆಳಕಕೋಲು
ತೂರಿಸುವ ಕ್ರಾಂತಿಕಾರ ನಾನು
ನೀ ಎಗ್ಗಿಲ್ಲದೆ
ಈ ಎಲ್ಲರೊಡನೆ ಮಲಗಿದರೆ
ಸುಮ್ಮನಿರಲಾಗುವುದೇನು?
ನೀನೋಡುವ
ಎಲ್ಲ ಸಿನಿಮಗಳ ಹೀರೋ ನಾನೇ
ಕೇಳಿಲ್ಲಿ,
ಗೂಂಡಾಗಳನ್ನು ಬಡಿದು
ಜಿಂಕೆಯನ್ನು ಹಿಡಿದು
ಧರ್ಮವನ್ನೆತ್ತಿ
ನಿನಗೊಬ್ಬ ಹೀರೋ ಕೊಟ್ಟು
ನಿನ್ನಪಹರಿಸಿ ಕಾಡುವ
ವಿಲನ್ ನಾನು
ನಿನಗೂ ನಾಟಕ ಹಿಡಿಸಲೆಂದು
ಒಮ್ಮೆಮ್ಮೆ ಕ್ಲೈಮ್ಯಾಕ್ಸಿನಲ್ಲಿ
ಸಾಯುವೆನು
ಒಂದು ಮಾಡುತ್ತೇನೆ
ನಿನ್ನ ಅಂದೆ
ಯಮನ ಗೆಲ್ಲಬಹುದು ನೀನು
ನಿಜಕ್ಕೂ
ನಾನು ಸತ್ಯವಾನ್ ಆಗಲಿಕ್ಕೆ
ಸಾಧ್ಯವೇನು?‌
ನೀ ಬೆಂಕಿಯಲ್ಲಿ ಬಿದ್ದ
ಪುಟಕ್ಕಿಟ್ಟ ಹೇಮ
ಬೀಳಲು ಹೇಳಿದವನಿಗೆ
ಬೆಂಕಿಯಲ್ಲಿ ನಿಷ್ಠೆಯೇನು?‌
ಹೀಗಲ್ಲ
ಕೈಬಿಡು ನಿಲ್ಲು ನನ್ನ
ರೇಖೆಯಾಚೆಗೆ
ಹುಣ್ಣಿಮೆಯಲ್ಲಿ ಧಗಧಗಿಸಿ
ಹೊತ್ತಿ ಉರಿವ
ಕಾಮಣ್ಣ;
ಕನ್ನಡಿಯ ಮನೆಯೊಳಗೆ
ಅಸಂಖ್ಯ ನಾನು
ನನ್ನೊಡನೆ ಕರಗಿ ನಿನ್ನ
ಮುಟ್ಟಲಾಗದೆ
ತಬ್ಬಲಾಗದೆ ಚೂರು
ಚೂರಾಗುವೆನು ನೋಡು.

Tuesday, June 26, 2012

ಹಕ್ಕಿಯೊಂದು ಗೊಡಕಟ್ಟಿತ್ತು…


ಹೊರಟಿತೊಂದು ಹಕ್ಕಿ ತನ್ನ ಗೂಡಕಟ್ಟಲು
ತನ್ನ ಗೆಳತಿಗಾಗಿ ಒಂದು ಮನೆಯ ಮಾಡಲು…

ಹಕ್ಕಿ ಗೂಡಕಟ್ಟಲೊಂದು ಮರವ ಆರಿಸಿ
ಮತ್ತೆ ತನ್ನ ಪ್ರೇಯಸಿಯ ಮನವ ಒಲಿಸಿ…

ಈ ಹಕ್ಕಿ ಕಷ್ಟಪಟ್ಟು ಕಡ್ಡಿಗಳ ತರಲು
ತನ್ನ ಗೂಡಿನ ಸವಿಗನಸ ಕಾಣುತಲಿರಲು…

ಮೇಲೆ ಹಾರಿ ಆಗಸದಿ ತೂರಿ ಕನಸುಗಳ ಮಾಲೆ ಜೋಡಿಸಿ
ದೂರ ದೂರದಿಂದ ತಂದ ಕಡ್ಡಿಗಳ ಜೋಡಿಸಿ…

ಮರದಮೇಲೆ ಕಟ್ಟಿತೊಂದು ಗೂಡನು ಹಕ್ಕಿ
ಕಷ್ಟಪಟ್ಟು ತಂದ ಕಡ್ಡಿಗಳ ಹೆಕ್ಕಿ ಹೆಕ್ಕಿ…

ತನ್ನ ಮನೆಯ ತನ್ನ ಮರಿಯ ಕನಸ ಕಾಣಲು
ಆದರೇನು ವಿಧಿಯ ಆಟ ಬೇರೆಯೇ ಇರಲು…



ಭೂಮಿಯಂಚಿನಿಂದ ಗಾಳಿ ಬೀಸುತ ಬರಲು
ಗಾಳಿ ಮಳೆಗೆ ಛಿದ್ರವಾಯ್ತು ಹಕ್ಕಿಯ ಗೂಡು…

ಸಿಡಿಲಿನಬ್ಬರಕೆ ಬಲಿಯಾಯ್ತು ಹಕ್ಕಿಯ ಗೂಡು
ಪಾಪ ಹಕ್ಕಿ ಕಂಡ ಕನಸಾಯ್ತು ನುಚ್ಚುನೂರು…

ಆದರೇನು ಬಿಡದೆ ಛಲವ ಹಕ್ಕಿ ಹಾರಿತು
ಅದರ ಗೆಳತಿಯೊಡನೆ ಸೇರಿ ಗೂಡ ಕಟ್ಟಿತು…

ಗಾಳಿ ಮಳೆಗೆ ಅಳುಕದಂತ ಗಟ್ಟಿ ಗೂಡದು
ಮಧುರ ಒಲುಮೆ ಪ್ರೀತಿ ಬೆರೆತ ದೊಡ್ಡ ಗೂಡದು…

ಸಹನೆಬೇಕು ಬಾಳಿನೊಳಗೆ...

ಮೊಗ್ಗು ಬಿರಿದು ಹೂವಾಗುವುದಕೆ
ಹೂವು ಅರಳಿ ಕಾಯಾಗುವುದಕೆ
ಕಾಯಿ ಮಾಗಿ ಹಣ್ಣಾಗುವುದಕೆ
ಸಹನೆಬೇಕು ಬಾಳಿನೊಳಗೆ...

ಪುಟ್ಟ ಕಂದ ಬರಲು ಜಗಕೆ
ಮಧುರ ನಗೆಯ ಬೀರುವುದಕೆ
ತೊದಲುನುಡಿಯ ನುಡಿಯುವುದಕೆ
ಸಹನೆಬೇಕು ಬಾಳಿನೊಳಗೆ...

ಶ್ರಮವಪಟ್ಟು ಓದುವುದಕೆ
ಹೆಚ್ಚು ಅಂಕ ಪಡೆಯುವುದಕೆ
ಓಳ್ಳೆಹೆಸರ ಪಡೆಯುವುದಕೆ
ಸಹನೆಬೇಕು ಬಾಳಿನೊಳಗೆ...

ಒಲುಮೆಯನ್ನು ಹುಡುಕುವುದಕೆ
ಮಧುರ ಪ್ರೀತಿ ಪಡೆಯುವುದಕೆ
ಮನದಿ ಆನಂದ ಹೊಮ್ಮುವುದಕೆ
ಸಹನೆಬೇಕು ಬಾಳಿನೊಳಗೆ...

ಪಕ್ಷಿಗೊಡ ಕಟ್ಟುವುದಕೆ
ಹೆಕ್ಕಿ ಕಡ್ಡಿ ತರಲು ಅದಕೆ
ಹೆಣ್ಣ ಪ್ರೀತಿ ಪಡೆಯುವುದಕೆ
ಸಹನೆಬೇಕು ಬಾಳಿನೊಳಗೆ...

ಬೀಜ ಗಿಡವಾಗುವುದಕೆ
ಗಿಡವು ಮರವಾಗುವುದಕೆ
ತಂಪನೆರಳ ನೀಡಲದಕೆ
ಸಹನೆಬೇಕು ಬಾಳಿನೊಳಗೆ...

ಚದುರಂಗವ ಆಡುವುದಕೆ
ದಾಳಗಳನು ನಡೆಸುವುದಕೆ
ವಿಜಯವನ್ನು ಸಾಧಿಸುವುದಕೆ
ಸಹನೆಬೇಕು ಬಾಳಿನೊಳಗೆ...

ಜೀವನವ ನಡೆಸುವುದಕೆ
ಬಾಳಿನೊಲುಮೆ ಕಾಣುವುದಕೆ
ಸಾರ್ಥಕ ಜೀವನ ಕಾಣುವುದಕೆ
ಸಹನೆಬೇಕು ಬಾಳಿನೊಳಗೆ...

ಬಾಲ್ಯದ ನೆನಪು



ಮರುಕಳಿಸುತಿಹುದಿಂದು ಬಾಲ್ಯದಾ ನೆನಪು
ಕಳೆದು ಹೊದೀತೇನೊ ಅದರ ಹೊಳಪು...

ಬಾಲ್ಯದಲಿ ಆಡಿದ ಆ ಮಣ್ಣಿನಾಟ
ಎಲ್ಲರೊಡಗೊಡಿದ ಗೆಳೆಯರ ಒಡನಾಟ...

ಕಟ್ಟುತಿದ್ದೆವಂದು ಮರಳಿನ ಕಪ್ಪೆಗೊಡೊಂದ
ನಿನಕಿಂತ ನನಗೊಡು ದೊಡ್ಡದು ನೋಡು, ಎಂತಹಾ ಅಂದ...

ಅಂದು ನಾ ವಾಡಿದ ಮರಕೋತಿ ಆಟ
ಮರದಿಂದ ಕೆಳಬಿದ್ದು ಕಲಿತಂತಾ ಪಾಟ...

ಎಲ್ಲರಿಂದ ನನ್ನನಾ ಬಚ್ಚಿಟ್ಟು ಕಣ್ಣಾ ಮುಚ್ಚಾಲೆಯಲಿ
ಗೆಳೆಯನ ಕಣ್ತಪ್ಪಿಸಿ ಮುಟ್ಟಿದೆ ಗುರಿ ಸಂತಸದಲಿ...

ನಾವಾಡುತಿದ್ದ ಆ ಗಿಲ್ಲಿದಾಂಡು
ಅದಕೆಂದು ಸೇರುತಿದ್ದ ಹುಡುಗರ ದಂಡು...

ಅಪ್ಪನೊಡಗೊಡಿ ನಾ ಕಂಡ ಸಿನಿಮ
ಮನೆಪಾಟ ಮಾಡಿಲ್ಲ !!!! ಬೈದಿದ್ದಳಮ್ಮ...

ಅಂದು ದೀಪಾವಳಿಯಂದು ಕೈ ಸುಟ್ಟ ಹಣತೆ
ಅದಹೇಳಿ ಅಮ್ಮನಲಿ ಪಡೆದಂತ ಮಮತೆ...

ತಪ್ಪು ಲೆಕ್ಕವಮಾಡಿ ತಿಂದತ ಪೆಟ್ಟು
ಒಳ್ಳೆ ಹಾಡನು ಹಾಡಿ ಪಡೆದಂತಾ ಗಿಫ್ಟು...

ಓ ನನ್ನ ಬಾಲ್ಯವೇ ಮತ್ತೆ ಬರಲಾರೆಯಾ
ಆ ಮಧುರ ಸವಿಯಾದ ದಿನಗಳನು ತಾರೆಯಾ...

ಮಳೆಯೇ ನಿನ್ನ ಮಾಯವಿದೇನೇ...


 ಭೋರೆಂದು ಸುರಿದಿದೆ ಗಗನದಿಂದ
ಭುವಿಯ ದಾಹವ ತಣಿಸುವ ತವಕದಿಂದ...

ದಟ್ಟ ಮೋಡದಿಂದ ಸುರಿದುಬಂದಿಹೆ ನೀನು
ನಿನ್ನ ರಭಸವ ವರ್ಣಿಸುವುದೇನು...

ಜೊತೆಗೋಡಿ ಬಂದಿದೆ ವೇಗವಾಗಿ ಗಾಳಿ
ತಲೆದೊಗಿ ನಿಂತಿಹವು ಮರಗಿಡಗಳು ಕೇಳಿ...

ನೀಬಂದಿಹೆಯೇನು ಕೆರೆ, ನದಿಯ ಒಡಲು ತುಂಬಲು
ಹೇಳುವುದೇನು ಭುವಿಯು ಸಂತಸದಿ ನಗುತಿರಲು...

ಸುರಿದು ಬಾ ಮಳೆಯೆ ಸುರಿದು ಬಾ
ಬರಡು ನೆಲವನು ಹಸನುಗೊಳಿಸು ಬಾ...

ಕೊಂಚ ಕರುಣೆಯ ತೋರು
ನಿನ ರಭಸದಲೂ ಮಂದಹಾಸವ ಬೀರು...

ನೀ ನಮಗೆ ಜೀವಜಲ
ಕಾಯುನೀ ಸಕಲ ಜೀವಸಂಕುಲ...
ಮಳೆಯೇ ನಿನ್ನ ಮಾಯವಿದೇನೇ...

ಅವಳಿಗಾಗಿ...


ಮನಸ್ಸಲ್ಲಿ ಮನಸನಿಟ್ಟು,
ನನ್ನೆದೆಯಲ್ಲಿ ಅಳಿಸಲಾಗದ ಹೆಜ್ಜೆಗುರುತನಿಟ್ಟು
ಎನ್ನೆದೆಯ ಬಡಿತದಲಿ ಅವಳ ಹೆಸರನಿಟ್ಟು
ಮುಗುಳುನಗೆ ನಕ್ಕು ಹೋದವಳು...

ಉರಿಬಿಸಿಲಲಿ ತಂಪನಿಟ್ಟು
ತುಂತುರುಮಳೆಯಲಿ ಪುಳಕವನಿಟ್ಟು
ಮೌನದಲ್ಲೇ ಮಾತನಾಡಿಸಿ ಸಂತಸವ ಕೊಟ್ಟು
ಮತ್ತೆ ಬರುವೆನೆಂದು ಹೇಳಿದವಳು...

ಬೆಳದಿಂಗಳ ರಾತ್ರಿಯಲಿ
ತಾರೆಗಳ ಸಂತೆಯಲಿ
ಚೆಂದಿರನ ನಾಚಿಸುತ್ತಾ
ಬೆಳಕಚೆಲ್ಲಿಬಂದವಳು...

ನೆತ್ತಿಸುಡುವ ಸೂರ್ಯಕಿರಣಗಳ ನಡುವೆ
ದಾಹತುಂಬಿದ ದಾರಿಯಲ್ಲಿ
ತಂಪು ನೆರಳಾಗಿ ಬಂದು
ಅಮೃತ ಸಿಂಚನವನ್ನೆರೆದವಳು...

ಹೊಂಗನಸಿನಲ್ಲಿ ಬಂದು
ಬೆಚ್ಚನೆಯ ಅಪ್ಪುಗೆಯ ಕೊಟ್ಟು
ಸಿಹಿ ಮುತ್ತನಿಟ್ಟವಳು
ನೀ ಹೋದದ್ದಾದರೂ ಎಲ್ಲಿಗೆ ???

ನಿನ್ನ ಅಪ್ಪುಗೆಗಾಗಿ ಕಾದಿರುವ ನನ್ನ ಬಾಹುಗಳು
ನಿನ್ನ ಕೂಗಿ ಕರೆದಿದೆ,
ಬಳಿ ಬಂದು ಒಮ್ಮೆ ಆ ಕಿರುನಗೆಯ ಬೀರು...
ನಿನ್ನ ಕಣ್ಣ ಅಂಚಿನಲಿ ಮಾತನಾಡು...

ನಿಶ್ಯಬ್ಧತುಂಬಿರುವ ಈ ಬಾಳಿನಲಿ
ಸವಿನುಡಿಗಳ ತೋರಣವ ಕಟ್ಟಿ
ಬಾಳಹಾದಿಯಲಿ ಜೊತೆಗೂಡಿ ಸಾಗಲು
ಕನಸಿನಿಂದ ನನಸಾಗಿ ಬಾ...

ಪರೋಕ್ಷ ಸಂಗಾತಿಗೆ...


ನಾ ನಿನಗಾಗಿ ನಿನ್ನ ದಿನವ
ಬೆಳಗುವ ಸೂರ್ಯನಾಗಬೇಕಿದೆ
ನಾ ನಿನಗಾಗಿ ಇರುಳಿನಲಿ
ಕತ್ತಲೆಯ ಓಡಿಸುವ ಚಂದಿರನಾಗಬೇಕಿದೆ,
ನಾ ನಿನ್ನಲಿರುವ ದುಃಖ ದುಮ್ಮಾನವನು
ಹೊತ್ತೋಯ್ಯುವ ನದಿಯಾಗಬೇಕಿದೆ,
ನಾ ನಿನ್ನಜೊತೆ ಜೊತೆಯಲಿ
ಹೆಜ್ಜೆಯಿಡುವ ನೆರಳಾಗಬೇಕಿದೆ,
ನಾ ನಿನ್ನ ಪ್ರೀತಿ ಪಡೆಯಬೇಕಿದೆ,
ನಿನ್ನೋಂದಿಗೆ ನಡೆಯಬೇಕಿದೆ
ದೂರ ಬಲು ದೂರ ಸಾಗಬೇಕಿದೆ
ನಾ ನಿನ್ನೊಳು ಬೆರೆಯಬೇಕಿದೆ
ನಾ ನಿನ್ನ ಕಾಣದಿದ್ದರೇನು,
ನಿನ್ನಯ ಸ್ಪರ್ಶವ ಕಂಡಿಹೆನು
ನೀ ಬರುವೆ ತಂಗಾಳಿಯ ನಡುವೆ ತೇಲುತಾ,
ಮನಕೆ ಮುದವ ನೀಡುತಾ
ನೀಲಿಗಗನದಿ ತೇಲುವ ಮೇಘಮಾಲೆಯ
ನಡುವೆ ನಾ ಕಾಣುವೆ ನಿನ್ನಯ ಚಿತ್ತಾರವ
ಇರುಳಿನ ತಂಪಾದ ಸಮಯದಲಿ ನಾ ಕಾಣುವೆ
ನಿನ್ನಯ ಚಂದವನು ಆ ಚುಕ್ಕಿಗಳ ಸೇರಿಸುತ...