Thursday, July 12, 2012

ಮುಟ್ಟಲಾಗದು ತಬ್ಬಲಾಗದು

ಹುಡುಗಿ
ನಿನ್ನಹಂಕಾರದ ಜೊಲ್ಲು ನಾಯಿಗೆ
ಸಾಕಾಗಿದೆ ಮೂಳೆ
ಎಸೆದೆಸೆದು
ಕೆಲವೊಮ್ಮೆ
ಮುಗ್ಧವಾಗಿ ನನ್ನದೇ
ಕೈಬೆರಳು, ಎದೆಗೂಡಿನ
ಎಲುಬು ಮುರಿದು
ಮತ್ತೆ ಕೆಲವೊಮ್ಮೆ
ಅಲ್ಯುಮಿನಿಯಂ ಫಾಯಿಲ್
ಅವುಚಿದ ಬಿಕರಿಗಿಟ್ಟ
ಬೋನ್ ಪೀಸು
ನೀನೆಂದೆ
ನನಗೊಂದು
ರಮ್ಯ ಕವನ ಬರೆದುಕೊಡು
ಏಕಾಂತದಲ್ಲಿ
ನಿನ್ನೆದೆಗೊರಗಿರುವಾಗ
ಗಂಟಲು ತಲುಪದ
ಹೃದಯದ ಭಾಷೆಯಲ್ಲಿ
ಹಾಡಿಬಿಡು
ಗೊತ್ತಿಲ್ಲ ನಿನಗೆ
ಬೆತ್ತಲಾಗಿ ಬರುವ ನಿನ್ನೆದುರಿಸಲು
ನನ್ನ ಸೇನೆ ಸನ್ನದ್ಧ
ನೀಶೆ, ಫ್ರಾಯ್ಡು, ಪತಂಜಲಿ
ನಿಂತಲ್ಲಿ ಮುತ್ತು
ಕೊಡೆನ್ನುವೆ ನೀನು
ನೀನಂದುಕೊಂಡಷ್ಟು
ಜಾಣ ನಾನಲ್ಲ
ಸರಪಳಿ ಕಟ್ಟಿ ನನ್ನನೇ
ಜೀತವಾಗಿಸಿ
ಮೆರೆವ ಅರಸ ನಾನು
ಮೊಟ್ಟೆಯೊಡೆದು ಬೆಳಕಕೋಲು
ತೂರಿಸುವ ಕ್ರಾಂತಿಕಾರ ನಾನು
ನೀ ಎಗ್ಗಿಲ್ಲದೆ
ಈ ಎಲ್ಲರೊಡನೆ ಮಲಗಿದರೆ
ಸುಮ್ಮನಿರಲಾಗುವುದೇನು?
ನೀನೋಡುವ
ಎಲ್ಲ ಸಿನಿಮಗಳ ಹೀರೋ ನಾನೇ
ಕೇಳಿಲ್ಲಿ,
ಗೂಂಡಾಗಳನ್ನು ಬಡಿದು
ಜಿಂಕೆಯನ್ನು ಹಿಡಿದು
ಧರ್ಮವನ್ನೆತ್ತಿ
ನಿನಗೊಬ್ಬ ಹೀರೋ ಕೊಟ್ಟು
ನಿನ್ನಪಹರಿಸಿ ಕಾಡುವ
ವಿಲನ್ ನಾನು
ನಿನಗೂ ನಾಟಕ ಹಿಡಿಸಲೆಂದು
ಒಮ್ಮೆಮ್ಮೆ ಕ್ಲೈಮ್ಯಾಕ್ಸಿನಲ್ಲಿ
ಸಾಯುವೆನು
ಒಂದು ಮಾಡುತ್ತೇನೆ
ನಿನ್ನ ಅಂದೆ
ಯಮನ ಗೆಲ್ಲಬಹುದು ನೀನು
ನಿಜಕ್ಕೂ
ನಾನು ಸತ್ಯವಾನ್ ಆಗಲಿಕ್ಕೆ
ಸಾಧ್ಯವೇನು?‌
ನೀ ಬೆಂಕಿಯಲ್ಲಿ ಬಿದ್ದ
ಪುಟಕ್ಕಿಟ್ಟ ಹೇಮ
ಬೀಳಲು ಹೇಳಿದವನಿಗೆ
ಬೆಂಕಿಯಲ್ಲಿ ನಿಷ್ಠೆಯೇನು?‌
ಹೀಗಲ್ಲ
ಕೈಬಿಡು ನಿಲ್ಲು ನನ್ನ
ರೇಖೆಯಾಚೆಗೆ
ಹುಣ್ಣಿಮೆಯಲ್ಲಿ ಧಗಧಗಿಸಿ
ಹೊತ್ತಿ ಉರಿವ
ಕಾಮಣ್ಣ;
ಕನ್ನಡಿಯ ಮನೆಯೊಳಗೆ
ಅಸಂಖ್ಯ ನಾನು
ನನ್ನೊಡನೆ ಕರಗಿ ನಿನ್ನ
ಮುಟ್ಟಲಾಗದೆ
ತಬ್ಬಲಾಗದೆ ಚೂರು
ಚೂರಾಗುವೆನು ನೋಡು.

No comments:

Post a Comment